ಶಿವಸಮುದ್ರ
	ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ಮಲ್ಲಿಕ್ಯಾತನಹಳ್ಳಿ ಬಳಿ ಇರುವ ಜಲವಿದ್ಯುತ್ ಉತ್ಪಾದನಾ ಕೇಂದ್ರ. ಮಳವಳ್ಳಿ-ಕೊಳ್ಳೇಗಾಲ ತಾಲ್ಲೂಕುಗಳ ಸರಹದ್ದಿನಲ್ಲಿದ್ದು ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಮದ್ದೂರು-ಮಳವಳ್ಳಿ ಮಾರ್ಗದಲ್ಲಿ ಸು.48 ಕಿಮೀ ದೂರದಲ್ಲೂ ಮೈಸೂರಿಗೆ 80 ಕಿಮೀ ದೂರದಲ್ಲೂ ಇದೆ. ಇಲ್ಲಿರುವ ಕೆ.ಶೇಷಾದ್ರಿ ಅಯ್ಯರ್ ಜಲವಿದ್ಯುತ್ ಸ್ಥಾವರದಲ್ಲಿ 10 ವಿದ್ಯುಜ್ಜನಕಗಳಿದ್ದು 42 ಮೆವಾ ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿದೆ. ಇಲ್ಲಿ ಕಾವೇರಿ ಜಲಪಾತವೂ ವಿದ್ಯುತ್ ಉತ್ಪಾದನಾಗಾ ರವೂ ಪ್ರಾಚೀನ ದೇವಾಲಯಗಳೂ ಇದ್ದು ಕರ್ನಾಟಕ ರಾಜ್ಯದ ಮುಖ್ಯ ಪ್ರವಾಸಿ ಕೇಂದ್ರಗಳಲ್ಲೊಂದಾಗಿದೆ. 

	ಕಾವೇರಿ ನದಿ ಇಲ್ಲಿ ಎರಡು ಕವಲುಗಳಾಗಿ ಸು.100 ಮೀ ಕೆಳಕ್ಕೆ ದುಮುಕುತ್ತದೆ. ಈ ಕವಲುಗಳ ನಡುವಿನ ಪ್ರದೇಶ ಕಾವೇರಿ ನದಿಯ ಎರಡನೆಯ ಬೃಹತ್ ದ್ವೀಪ. ಈ ದ್ವೀಪವನ್ನು ಹೆಗ್ಗುರು ಎಂದು ಕರೆಯಲಾಗುತ್ತಿತ್ತು. ಇಲ್ಲಿ ದುಮುಕುವ ಕಾವೇರಿ ನದಿಯ ಪಶ್ಚಿಮ ಕವಲಿಗೆ ಗಗನಚುಕ್ಕಿ ಎಂದೂ ಅಲ್ಲಿಗೆ ಸುಮಾರು ಒಂದೂವರೆ ಕಿಮೀ ದೂರದಲ್ಲಿ ದುಮುಕುವ ಪೂರ್ವದ ಕವಲಿಗೆ ಭರಚುಕ್ಕಿ ಎಂದೂ ಹೆಸರು. ಮುಂದೆ ಕಾವೇರಿಯ ಈ ಎರಡು ಕವಲುಗಳೂ ಶಿವಸಮುದ್ರದ ಈಶಾನ್ಯ ದಿಕ್ಕಿನಲ್ಲಿ ಒಂದುಗೂಡಿ ಪೂರ್ವಾಭಿಮುಖವಾಗಿ ಹರಿಯುತ್ತವೆ.

	ಇಲ್ಲಿನ ವಿದ್ಯುತ್ ಉತ್ಪಾದನಾ ಕೇಂದ್ರ ಭಾರತದ ಹಾಗೂ ಏಷ್ಯದ ಅತ್ಯಂತ ಹಳೆಯ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲೊಂದು. ಇದು 1902ರಲ್ಲಿ 4,300 ಕಿವಾಗಳ ವಿದ್ಯುತ್ ಉತ್ಪಾದನಾಸಾಮಥ್ರ್ಯ ದೊಂದಿಗೆ ಇಲ್ಲಿ ಸ್ಥಾಪಿತವಾಯಿತು. ಜಲಪಾತದ ಇಳಿಜಾರನ್ನು ಉಪಯೋಗಿಸಿಕೊಂಡು ಮೇಲಿನಿಂದ ಕಾಲುವೆಯ ಮೂಲಕ ನೀರು ತಂದು ಬೃಹತ್ ಕೊಳವೆಗಳ ಮೂಲಕ ವಿದ್ಯುದಾಗಾರಕ್ಕೆ ಹಾಯಿಸುವ ವ್ಯವಸ್ಥೆ ಇದೆ. ಕೋಲಾರ ಚಿನ್ನದ ಗಣಿ ಪ್ರದೇಶಕ್ಕೆ ಅಗತ್ಯವಿದ್ದ ವಿದ್ಯುತ್ತನ್ನು ಒದಗಿಸುವುದು ಈ ಕೇಂದ್ರಸ್ಥಾಪನೆಯ ಮುಖ್ಯ ಉದ್ದೇಶಗಳಲ್ಲೊಂದಾಗಿತ್ತು. ಪ್ರಾರಂಭದಲ್ಲಿ ಈ ಕೇಂದ್ರದ ಉತ್ಪಾದನಾ ಸಾಮಥ್ರ್ಯ 4.5 ಮೆವಾ ಗಳಷ್ಟಿತ್ತು. 1925ರ ಹೊತ್ತಿಗೆ ಇಲ್ಲಿ ಏಳನೆಯ ಯಂತ್ರವನ್ನು ಸ್ಥಾಪಿಸಲಾಯಿತು. ಇಲ್ಲಿಗೆ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ವರ್ಷವೆಲ್ಲ ನೀರೊದಗಿಸುವ ವ್ಯವಸ್ಥೆ ಇದ್ದು ಕ್ರಮೇಣ ಇದರ ಉತ್ಪಾದನಾ ಸಾಮಥ್ರ್ಯ 42 ಮೆವಾ ಗಳಿಗೆ ಹೆಚ್ಚಿದೆ. ಈ ವಿದ್ಯುತ್ ಉತ್ಪಾದನಾ ಕೇಂದ್ರವಿರುವ ಪ್ರದೇಶ ಬ್ಲಫ್ ಎಂದೂ ಪ್ರಸಿದ್ಧ. ವಿದ್ಯುತ್ ಸ್ಥಾವರವನ್ನು ನೋಡಲು ಕೆಳಗೆ ಇಳಿಯಲು ವಿದ್ಯುತ್ ಚಾಲಿತ ಕಂಬಿಗಾಡಿಗಳ ಸೌಲಭ್ಯವಿದೆ. 

	ಇಲ್ಲಿ ರಂಗನಾಥಸ್ವಾಮಿ, ಸೋಮೇಶ್ವರ, ವೀರಭದ್ರ ದೇವಾಲಯ ಗಳಿವೆ. ಇವುಗಳಲ್ಲಿ ರಂಗನಾಥಸ್ವಾಮಿ ದೇವಾಲಯ ಮುಖ್ಯವಾದುದು. ಕಾವೇರಿ ನದಿ ದಡದ ಮೇಲಿರುವ ಶ್ರೀರಂಗಪಟ್ಟಣ, ಶಿವಸಮುದ್ರ ಮತ್ತು ಶ್ರೀರಂಗ ಈ ಮೂರು ಕಡೆಗಳಲ್ಲೂ ರಂಗನಾಥಸ್ವಾಮಿ ದೇವಾಲಯಗಳಿದ್ದು ಶಿವಸಮುದ್ರದ ರಂಗನಾಥ ದೇವಾಲಯ ಮಧ್ಯರಂಗವೆಂದು ಪ್ರಸಿದ್ಧವಾಗಿದೆ. ಈ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದದ್ದು. ಇಲ್ಲಿಯ ಶಯನಭಂಗಿಯಲ್ಲಿರುವ ಸುಮಾರು ಎರಡೂವರೆ ಮೀಟರ್ ಉದ್ದದ ರಂಗನಾಥ ದೇವರಿಗೆ ಜಗನ್ಮೋಹನ ರಂಗನಾಥನೆಂದು ಕರೆಯುತ್ತಾರೆ. ಈ ವಿಗ್ರಹದ ಪಾದದ ಬಳಿ ಕಾವೇರಿಯ ಚಿಕ್ಕ ವಿಗ್ರಹವಿದೆ. ಇದಲ್ಲದೆ ಈ ಗುಡಿಯಲ್ಲಿ ತಕ್ಷಕ, ಆದಿಶೇಷ, ರಾಮಪರಿವಾರ, ಆಳ್ವಾರರು ಮತ್ತು ರಾಮಾನುಜಾಚಾರ್ಯರು ಮೊದಲಾದ ವಿಗ್ರಹಗಳಿವೆ. 

	ಸೋಮೇಶ್ವರ ಗುಡಿ ಇಲ್ಲಿಯ ಇನ್ನೊಂದು ದೊಡ್ಡ ದೇವಾಲಯ. ಇದೂ ಹೊಯ್ಸಳರ ಕಾಲದ ರಚನೆ. ಈ ದೇವಾಲಯದ ನೆಲಕಟ್ಟು ಅಷ್ಟಕೋನಾಕಾರದಲ್ಲಿದೆ. ಇಲ್ಲಿ ಸೋಮೇಶ್ವರ, ಗಣೇಶ ಮತ್ತು ಬಾಲಸುಬ್ರಹ್ಮಣ್ಯರ ವಿಗ್ರಹಗಳಿವೆ. ಸೂರ್ಯಚಂದ್ರರ ಮೂರ್ತಿಗಳಿವೆ. ದೇವಾಲಯದ ಕಂಬಗಳಲ್ಲಿ ಆಲಂಕಾರಿಕ ಕೆತ್ತನೆ ಮಾಡಲಾಗಿದೆ. 19ನೆಯ ಶತಮಾನ ದಲ್ಲಿ ನಿರ್ಮಿತವಾದ ಬಸವನ ವಿಗ್ರಹ ದೇವಾಲಯದ ತುದಿಯಲ್ಲಿದೆ. ಇಲ್ಲಿನ ನವರಂಗ ಮತ್ತು ಮುಖಮಂಟಪಗಳಲ್ಲಿ ದ್ರಾವಿಡ ಶೈಲಿಯ ಕಂಬಗಳಿವೆ. ಮುಖಮಂಟಪದ ಸೋಪಾನದ ಮುಂಭಾಗ ಸಿಂಹಶಿರಗಳಿಂದ ಆಧಾರಿತವಾಗಿದೆ. ದೇವಾಲಯದ ನೆಲಕಟ್ಟಿನ ಮೇಲೆ ಎರಡನೆಯ ಬಲ್ಲಾಳನ ಕಾಲದ ತಮಿಳು ಶಾಸನವಿದೆ. ಈ ದೇವಾಲಯದ ಸಮೀಪದಲ್ಲಿಯೇ ಚೋಳ ಮಾದರಿಯ ಮೀನಾಕ್ಷಿ ಗುಡಿ ಇದೆ. ಸೋಮೇಶ್ವರ ಉಮ್ಮತ್ತೂರು ಪಾಳೆಯಗಾರರ ಮನೆದೇವರಾಗಿತ್ತು. 

	ವೀರಭದ್ರ ಗುಡಿಯಲ್ಲಿರುವ 1604ರ ಒಂದು ಶಾಸನ ಹದಿನಾಡ ನಾಯಕನೊಬ್ಬ ದೇವಾಲಯಕ್ಕೆ ದತ್ತಿಬಿಟ್ಟನೆಂದು ತಿಳಿಸುತ್ತದೆ. ದ್ವೀಪದ ಪಶ್ಚಿಮದಲ್ಲಿರುವ ಬೆಟ್ಟದ ಮೇಲೆ ಶ್ರೀರಾಮ ತನ್ನ ತಂದೆ ದಶರಥನಿಗೆ ಪಿಂಡವನ್ನು ಅರ್ಪಿಸಿದನೆಂದೂ ಆ ಕಾರಣವಾಗಿ ಅದಕ್ಕೆ ಪ್ರೇತಬೆಟ್ಟವೆಂದು ಹೆಸರು ಬಂತೆಂದೂ ಪ್ರತೀತಿ. ಹೊಯ್ಸಳರ ಕಾಲದಲ್ಲಿ ಈ ಊರು ಉಚ್ಛ್ರಾಯಸ್ಥಿತಿಯಲ್ಲಿತ್ತು. ಹದಿನಾರನೆಯ ಶತಮಾನದಲ್ಲಿ ಗಂಗರಾಜ ಎಂಬುವನು ಈ ಊರನ್ನು ವಿಸ್ತರಿಸಿ ವೈಭವದಿಂದ ಆಳಿದ. ಅವನ ಮಗ ನಂದಿರಾಜ ಯಾವುದೋ ಅಪರಾಧಕ್ಕಾಗಿ ಪತ್ನೀಸಮೇತ ಕುದುರೆಯ ಮೇಲೆ ಕುಳಿತು ಗಗನಚುಕ್ಕಿ ಜಲಪಾತಕ್ಕೆ ಹಾರಿ ಪ್ರಾಣಬಿಟ್ಟ. ಅವನ ಮಗ ಎರಡನೆಯ ಗಂಗರಾಜ ಆಳುತ್ತಿದ್ದಾಗ ತನ್ನ ನೆರೆಯ ಪಾಳೆಯಗಾರ ರಾಗಿದ್ದ ಅವನ ಇಬ್ಬರು ಅಳಿಯಂದಿರು, ತಮ್ಮ ಪತ್ನಿಯರ ಅಹಂಭಾವ ವನ್ನು ಮುರಿಯಲು ಮಾವನ ಮೇಲೆ ಯುದ್ಧಸಾರಿದರು. ಆಗ ಎರಡನೆಯ ಗಂಗರಾಜ ಹನ್ನೆರಡು ವರ್ಷಗಳ ಕಾಲ ಯುದ್ಧಮಾಡಿ ಕೊನೆಗೆ ಯುದ್ಧರಂಗದಲ್ಲಿ ವೀರಾವೇಶದಿಂದ ಕಾದಾಡಿ ಮಡಿದ. ಇದನ್ನು ಕಂಡು ಪಶ್ಚಾತ್ತಾಪಪಟ್ಟ ಇಬ್ಬರು ಅಳಿಯಂದಿರೂ ತಮ್ಮ ಪತ್ನಿಯ ರೊಂದಿಗೆ ಗಗನಚುಕ್ಕಿಯಲ್ಲಿ ಬಿದ್ದು ಪ್ರಾಣಬಿಟ್ಟರೆಂದು ತಿಳಿದುಬರುತ್ತದೆ. ಅನಂತರ ಚನ್ನಪಟ್ಟಣದ ಜಗದೇವರಾಯ ಮತ್ತು ತಲಕಾಡಿನ ಶ್ರೀರಂಗ ರಾಜ ಇಲ್ಲಿಯ ಐಶ್ವರ್ಯವನ್ನೆಲ್ಲ ಕೊಳ್ಳೆ ಹೊಡೆದರು.      	
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ